ಹಿಂದೂ ಧಾರ್ಮಿಕ ವ್ಯಕ್ತಿತ್ವಗಳ ಕುರಿತ ವಿಡಿಯೋಗೆ ಸಂಬಂಧಿಸಿದಂತೆ ಯೂಟ್ಯೂಬರ್ ಧ್ರುವ್ ರಾಠಿ ವಿರುದ್ಧ ದಾಖಲಾಗಿರುವ ದೂರಿನ ಪ್ರಾಥಮಿಕ ವಿಚಾರಣೆ ಇನ್ನೂ ಪ್ರಗತಿಯಲ್ಲಿದೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ತನಿಖೆಯನ್ನು ಪೂರ್ಣಗೊಳಿಸಲು ಗೂಗಲ್ ಮತ್ತು ಯೂಟ್ಯೂಬ್ನಿಂದ ಎಲೆಕ್ಟ್ರಾನಿಕ್ ಸಾಕ್ಷ್ಯಗಳು ಹಾಗೂ ಖಾತೆಯ ವಿವರಗಳನ್ನು ನಿರೀಕ್ಷಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಂತಿಮ ವರದಿ ಸಲ್ಲಿಸಲು ಪೊಲೀಸರು ಹೆಚ್ಚುವರಿ ಕಾಲಾವಕಾಶ ಕೋರಿದ್ದಾರೆ.
2026ರ ಮಾರ್ಚ್ 22ರಂದು ಅಮಿತಾ ಸಚ್ದೇವ ಎಂಬುವರು ಸಲ್ಲಿಸಿದ್ದ ದೂರಿನ ಕುರಿತು ವರದಿ ನೀಡುವಂತೆ ನ್ಯಾಯಾಲಯವು ಜೂನ್ನಲ್ಲಿ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಅದರಂತೆ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನಿಹಾರಿಕಾ ಕುಮಾರ್ ಶರ್ಮಾ ಅವರ ನ್ಯಾಯಪೀಠಕ್ಕೆ ಪೊಲೀಸರು ಸ್ಥಿತಿಗತಿ ವರದಿಯನ್ನು ಸಲ್ಲಿಸಿದರು.
ರಾಠಿ ತಮ್ಮ ವಿಡಿಯೋದಲ್ಲಿ ಹಿಂದೂ ಧರ್ಮಗ್ರಂಥಗಳನ್ನು ತಿರುಚಿ, ಸನಾತನ ಧರ್ಮವನ್ನು ಅವಮಾನಿಸಿದ್ದಾರೆ ಮತ್ತು ಕೋಮು ಸಾಮರಸ್ಯಕ್ಕೆ ಭಂಗ ತರುವಂತೆ ಮಾತನಾಡಿದ್ದಾರೆ ಎಂದು ಸಚ್ದೇವ ಆರೋಪಿಸಿದ್ದರು. ಅಲ್ಲದೆ ಶ್ರೀರಾಮ ಮತ್ತು ಸೀತೆಯಂತಹ ಪೂಜ್ಯ ವ್ಯಕ್ತಿತ್ವಗಳು ಮಾಂಸಾಹಾರ ಮತ್ತು ಮದ್ಯ ಸೇವಿಸುತ್ತಿದ್ದರು ಎಂದು ಬಿಂಬಿಸುವ ಮೂಲಕ ದುರುದ್ದೇಶಪೂರಿತ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅವರು ದೂರಿದ್ದರು.
ಈ ಆರೋಪಗಳ ಹಿನ್ನೆಲೆಯಲ್ಲಿ ವಿಡಿಯೋವನ್ನು ಪರಿಶೀಲಿಸಿರುವ ಪೊಲೀಸರು, ಖಾತೆ ಮತ್ತು ವಿಡಿಯೋದ ವಿವರಗಳನ್ನು ಕೋರಿ ಗೂಗಲ್ ಹಾಗೂ ಯೂಟ್ಯೂಬ್ಗೆ ನೋಟಿಸ್ ಜಾರಿ ಮಾಡಿದ್ದಾರೆ. ತನಿಖೆಯ ಸ್ವರೂಪ ಮತ್ತು ನಿರ್ದಿಷ್ಟ ಅಂಶಗಳ ಕುರಿತು ಎರಡೂ ಸಂಸ್ಥೆಗಳು ಸ್ಪಷ್ಟೀಕರಣ ಕೇಳಿದ್ದು, ಅದಕ್ಕೆ ಸೂಕ್ತ ವಿವರಣೆ ನೀಡಿ ಹೊಸ ಮನವಿ ಸಲ್ಲಿಸಲಾಗುವುದು ಎಂದು ಪೊಲೀಸರು ವಿವರಿಸಿದ್ದಾರೆ. ಡಿಜಿಟಲ್ ಮಾಹಿತಿ ಲಭ್ಯವಾದ ಬಳಿಕ ಅಂತಿಮ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಈ ವಿಡಿಯೋಗೆ ಸಂಬಂಧಿಸಿದಂತೆ ಸಚ್ದೇವ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ನಿರ್ದೇಶನದ ಮೇರೆಗೆ ಜುಲೈ 15ರಂದು ಕುಂದುಕೊರತೆಗಳ ಮೇಲ್ಮನವಿ ಸಮಿತಿಯು (GAC), ಈ ವಿಡಿಯೋ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂದು ಅಭಿಪ್ರಾಯಪಟ್ಟು ಅದನ್ನು ತೆಗೆದುಹಾಕಲು ಆದೇಶಿಸಿತ್ತು. ಬಳಿಕ, ಗೂಗಲ್ ಮತ್ತು ಯೂಟ್ಯೂಬ್ ಈ ವಿಡಿಯೋಗೆ ಭಾರತದಲ್ಲಿ ಪ್ರವೇಶ ನಿರ್ಬಂಧಿಸಿರುವುದನ್ನು ಹೈಕೋರ್ಟ್ ದಾಖಲಿಸಿಕೊಂಡಿತ್ತು.
